ರಾವ್ ಬಹದ್ದೂರ್ : - 
೧೯೧೦-೮೪. ಕನ್ನಡದ ಮಹತ್ತ್ವದ ಲೇಖಕ. ಕಾದಂಬರಿಕಾರ, ಕತೆಗಾರ, ಹರಟೆಗಾರ, ಗಾಂಧೀವಾದಿ, ಕೃಷಿಕ. ಇವರ ಪೂರ್ಣ ಹೆಸರು ರಾಮಚಂದ್ರ ಭೀಮರಾವ್ ಕುಲಕರ್ಣಿ. ಜನ್ಮಸ್ಥಳ ವಿಜಯಪುರ ಜಿಲ್ಲೆಯ ಕೃಷ್ಣಾನದಿತೀರದಲ್ಲಿರುವ ಹಿರೇಪಡಸಲಗಿ. ತಂದೆ ಭೀಮರಾವ್ ಕುಲಕರ್ಣಿ; ತಾಯಿ ಸುಭದ್ರಾಬಾಯಿ, ಪ್ರಾಥಮಿಕ ಶಿಕ್ಷಣ ಹರೇಪಡಸಲಗಿ, ಪ್ರೌಢಶಿಕ್ಷಣ ಹಿರೆಕರೂರು, ಕಾಲೇಜು ಶಿಕ್ಷಣ ಕರ್ನಾಟಕ ಕಾಲೇಜು, ಧಾರವಾಡದಲ್ಲಿ ನಡೆಯಿತು.

ಇವರಿಗೆ ವಿದ್ಯಾರ್ಥಿ ಜೀವನದಿಂದಲೂ ಹಲವಾರು ವಿದ್ವಾಂಸರ, ಮಹನೀಯರ ಹಾಗೂ ಗಣ್ಯವ್ಯಕ್ತಿಗಳ ಪರಿಚಯ ಹಾಗೂ ಸಂಪರ್ಕವಿತ್ತು. ಆ ಸಂಪರ್ಕವೇ ಇವರ ಯುವ ಮನಸ್ಸನ್ನು ರೂಪಿಸಿ ಸಾಹಿತ್ಯಕ ಅಭಿರುಚಿಗೆ ತಿರುಗಿಸಿದ ಶಕ್ತಿಗಳು ಎಂದರೆ ತಪ್ಪಾಗಲಾರದು.

ಇವರು ಒಕ್ಕಲು ಮನೆತನದಿಂದ ಬಂದವರು, ಕಾಲೇಜು ಶುಲ್ಕ ಕಟ್ಟಲೂ ಕೈಲಾಗದಷ್ಟು ಆರ್ಥಿಕ ದುಸ್ಥಿತಿಯಿಂದಾಗಿ ವಿದ್ಯಾರ್ಥಿ ಜೀವನದಲ್ಲೇ ಓದಿನ ಜೊತೆಗೆ ಬ್ಯಾಂಕೊಂದರಲ್ಲಿ ಬಿಡುವಿನ ವೇಳೆಯಲ್ಲಿ ನೌಕರಿ ಮಾಡುತ್ತ ಬಿ.ಎ. ಮಾಡಿದ್ದೇ ಸಾಹಸ. ಮುಂದೆ ಹಿಡಿದ ನೌಕರಿಯಲ್ಲಿ ಯಾವುದನ್ನೂ ಓದಲು ಬಿಡುವಾಗದಷ್ಟು, ಬಿಡುವು ಮಾಡಿಕೊಳ್ಳಲಾಗದಷ್ಟು ತಲ್ಲೀನತೆ, ಏಕತಾನತೆ, ಹೀಗಾಗಿ ರಾವ್ ಬಹದ್ದೂರರ ಸಮಕಾಲೀನ ಸಾಹಿತ್ಯ ಕೃತಿಗಳ ಅಧ್ಯಯನ ತೀರಾ ಕಡಿಮೆ ಎಂದೇ ಹೇಳಬೇಕು. ಆದರೆ ಇವರು ಬದುಕಿನಿಂದ ಪಡೆದದ್ದು, ಅನುಭವಿಸಿದ್ದು ಅಪಾರ. 
ಕನ್ನಡ ಸಾಹಿತ್ಯಕ್ಕೆ ರಾವ್‍ಬಹದ್ದೂರರು ಉತ್ತರ ಕರ್ನಾಟಕದ ಬದುಕು, ಜನ ಜೀವನ, ಪ್ರಾದೇಶಿಕ ಸೊಗಡನ್ನು ಕೊಟ್ಟಿರುವಂತೆ ಅಲ್ಲಿನ ವಿಶಿಷ್ಟಭಾಷೆ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಭಾರತದ ಸ್ಥಿತಿಗತಿ. ಗಾಂಧೀಯುಗದ ಆದರ್ಶಗಳು, ಮೌಲ್ಯಗಳು ಹಾಗೂ ಗಾಂಧೀ ಅನಂತರ ಭಾರತ ಕಂಡ ಸ್ಥಿತ್ಯಂತರಗಳನ್ನು ಆರ್ಷೇಯ ಮೌಲ್ಯಗಳ ಹಿನ್ನಲೆಯಲ್ಲಿ ವಿವೇಚಿಸುವುದರ ಮೂಲಕ ಉದಾತ್ತ ಜೀವನದೃಷ್ಟಿ ನೀಡಿದ್ದಾರೆ. ಇವರ ಸಾಹಿತ್ಯ ಕೃತಿಗಳಲ್ಲಿ ಸ್ವಸ್ಥ ಮನಸ್ಸೊಂದು ಮಾನವ ಹಿತಕ್ಕಾಗಿ ಮಿಡಿಯುವದನ್ನು ಉದ್ದಕ್ಕೂ ಕಾಣುತ್ತೇವೆ. 
ಇವರು ತಮ್ಮ ಬದುಕಿನ ಬವಣೆಗಳನ್ನು ನೀಗಲು ಎಷ್ಟೋ ಅವಸರದ ಬರವಣಿಗೆಗಳನ್ನು ಮಾಡಿದ್ದಾರೆಂಬುದು ನಿಜ. ಆದರೆ ಎಂದೂ ನೈತಿಕ ಮೌಲ್ಯಗಳ ನೆಲೆಗಟ್ಟನ್ನೂ ತಮ್ಮ ಜೀವನದೃಷ್ಟಿಯನ್ನೂ ಗಾಂಧೀದರ್ಶನವನ್ನೂ ಮಾನವೀಯ ಅನುಕಂಪವನ್ನೂ ತೊರೆದು ಅಗ್ಗದ ಜನಪ್ರಿಯತೆಗಾಗಿ ಬರೆಯಲಿಲ್ಲ. ಈ ದೃಷ್ಟಿಯಿಂದ ಇವರ ಕೃತಿಗಳು ಜೀವನಾನುಭವಗಳ ಮೂಸೆಯಲ್ಲಿ ಮೂಡಿಬಂದವು. ಸೂಜಿಗಲ್ಲು ಕಾದಂಬರಿಯಲ್ಲಿ ತ್ಯಾಗ-ಸೇವಾಭಾವನೆಗಳು ಸೂಜಿಗಲ್ಲಿನಂತೆ ಜನರನ್ನು ಆಕರ್ಷಿಸುವ ದಿವ್ಯಶಕ್ತಿಯನ್ನು ಮನುಷ್ಯನಿಗೆ ನೀಡುವುದೆಂಬುದನ್ನು ಬ್ರಹ್ಮಚಾರಿ ನಾರಾಯಣನ ಮರಣಾನಂತರದ ಘಟನೆಗಳಿಂದ ಚಿತ್ರಿಸಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸೇರಿದವರು ಪಟ್ಟ ಕಷ್ಟಗಳು, ಅವರು ಮಾಡಿದ ತ್ಯಾಗ-ಬಲಿದಾನ, ನಿಸ್ವಾರ್ಥಭಾವನೆಯಿಂದ ಬದುಕಿನಲ್ಲಿ ಸಂಘರ್ಷ ನಡೆಸಿದವರ ಚಿತ್ರಣವನ್ನು ಕನಸು ನನಸು; ತಬ್ಬಲಿಗಳು; ಬಿತ್ತಿ ಬೆಳೆದವರು; ವೃಂದಾವನ - ಕಾದಂಬರಿಗಳಲ್ಲಿ ಕಾಣುತ್ತೇವೆ. ಯಾವ ಜನತೆಯ ಸ್ವಾತಂತ್ರ್ಯ ಹೋರಾಟ ನಡೆಸಲಾಯಿತೊ ಆ ಹೋರಾಟದ ಮುಂಚೂಣಿಯಲ್ಲಿದ್ದವರೇ ಸ್ವತಂತ್ರ ಭಾರತದಲ್ಲಿ ಅಧಿಕಾರದ ಗದ್ದುಗೆ ಹಿಡಿದು ಜನತೆಯ ಶೋಷಣೆಯನ್ನು ಅಬಾಧಿತವಾಗಿ ನಡೆಸಿದ್ದು ಈ ದೇಶದ ದುರಂತ ಎಂಬ ವಿಷಾದದ ಧನಿಯನ್ನು ಒಟ್ಟಾರೆ ಇವರ ಎಲ್ಲ ಕಾದಂಬರಿಗಳಲ್ಲೂ ಕಾಣಬಹುದು. ಅನರ್ಹರಿಗೆ ಅಧಿಕಾರ ಪಟ್ಟ, ದುಡಿಯದೇ ಹಣ ಪಡೆಯುವ ದುರಾಸೆ, ದುಡ್ಡಿದ್ದರೆ ಎಲ್ಲವನ್ನೂ ಪಡೆಯಬಹುದು ಎಂಬ ಭ್ರಮೆಯಿಂದ ಧನಸಂಚಯ ಮಾಡುವವರೆ ನೈತಿಕ ಅಧೋಗತಿಯ ಚಿತ್ರಣಗಳನ್ನು ಧೂಮಕೇತು, ಕಾಂಚನಮೃಗ, ತಬ್ಬಲಿಗಳು ಕೃತಿಗಳಲ್ಲಿ ಕಾಣಬಹುದು. ಪ್ರಜೆಗಳ ಹಿತಕ್ಕೆಂದು ರೂಪಿಸಿದ ಯೋಜನೆಗಳ ಪ್ರಯೋಜನ ಕೆಲವೇ ಸ್ವಾರ್ಥಿಗಳು ಪಡೆಯುತ್ತಿರುವುದರಿಂದ ಪ್ರಜಾಪ್ರಭುತ್ವದ ಬಗ್ಗೆ ಜನತೆಗಿದ್ದ ವಿಶ್ವಾಸವೇ ಬತ್ತಿಹೋಗುವ ದುರಂತಸ್ಥಿತಿಯನ್ನು ಗೌಡರ ಕೋಣ ಕೃತಿಯಲ್ಲಿ ಚಿತ್ರಿಸಲಾಗಿದೆ.

ರಾವ್ ಬಹದ್ದೂರರ ಉತ್ತಮ ಕೃತಿಗಳಲ್ಲೊಂದಾದ `ಗ್ರಾಮಾಯಣ' ಭಾರತೀಯಸಾಹಿತ್ಯಕ್ಕೆ ಕನ್ನಡದ ವಿಶಿಷ್ಟ ಕೊಡುಗೆ ಎನ್ನಬಹುದು. ಯಾವುದೇ ಲೇಖಕನೊಬ್ಬನ ಚೊಚ್ಚಲು ಕೃತಿಯೊಂದು ಈ ಬಗೆಯ ಗೌರವ, ಹೆಗ್ಗಳಿಕೆಯನ್ನು ಪಡೆದಿರುವುದು ಅಪರೂಪದ ಘಟನೆ. `ಗ್ರಾಮಾಯಣ' ಕಾದಂಬರಿ ರಚನೆಯಾದದ್ದೇ ಪ್ರೇಮ-ಕಾಮ ಒಂದೇ ಮನುಷ್ಯನನ್ನು ಕಾಡುವ ಸಮಸ್ಯೆಯಲ್ಲ. ಅವನನ್ನು ಕಾಡುವ ಅನಂತ ಸಮಸ್ಯೆಗಳಿವೆ. ಅವನ್ನು ಅಭಿವ್ಯಕ್ತಿಗೊಳಿಸುವ ಕಾದಂಬರಿಯನ್ನು ಏಕೆ ಬರೆಯಬಾರದೆಂಬ ಸವಾಲನ್ನು ಸ್ವೀಕರಿಸಿದ್ದರಿಂದ ಗ್ರಾಮಾಯಣದಲ್ಲಿ ಹಳ್ಳಿಯ ನೂರು ಮುಖಗಳ ಚಿತ್ರಣವಿದ್ದು ಇಡೀ ಹಳ್ಳಿಯೇ ಅಲ್ಲಿ ಸಾಕಾರಗೊಂಡಿದೆ. 

ಇವರು ಪತ್ರಿಕೋದ್ಯಮಿಯಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆ ಮಹತ್ತ್ವದ್ದು. ಕನ್ನಡ ಪತ್ರಿಕೋದ್ಯಮ ಇನ್ನೂ ಶೈಶವಾವಸ್ಥೆಯಲ್ಲಿದ್ದ ದಿನಗಳು ಅವು. ಸ್ವಾತಂತ್ರ್ಯ ಪೂರ್ವಕಾಲದಲ್ಲಂತೂ ಸರ್ಕಾರದ ವಕ್ರದೃಷ್ಟಿಗೆ ತುತ್ತಾಗಿ ಇಡೀ ಪತ್ರಿಕಾ ಕೌಏರಿ, ಮುದ್ರಣಾಲಯಗಳಿಗೆ ಬೀಗಮುದ್ರೆ ಹಾಕಿ ಸಂಪಾದಕರನ್ನು ಸೆರೆಹಿಡಿದು ಯಾವಾಗ ಜೈಲಿಗೆ ಕಳಿಸುವರೋ ಎಂಬ ಭಯದಲ್ಲಿಯೇ ಕೆಲಸಮಾಡಬೇಕಾಗಿತ್ತು. ಅಂಥ ದಿನಗಳಲ್ಲಿ ಇವರು ಪತ್ರಿಕೋದ್ಯಮಿಯಾಗಿ ಕೆಲಸ ಮಾಡಿದರು. ಸುಮಾರು ಒಂದೂವರೆ ದಶಕಗಳಷ್ಟು ಕಾಲ ಕರ್ನಾಟಕದ ಪ್ರಮುಖ ದಿನಪತ್ರಿಕೆ ಸಂಯುಕ್ತ ಕರ್ನಾಟಕದ ಸಹಸಂಪಾದಕರಾಗಿ ದುಡಿದರು. ಸಂಯುಕ್ತ ಕರ್ನಾಟಕ ಬಿಟ್ಟ ಬಳಿಕ ರಾವ್‍ಬಹದ್ದೂರರು ಇನ್ನಿತರ ಒಂದೆರಡು ಪತ್ರಿಕೆಗಳ ಸಂಪಾದಕತ್ವವನ್ನು ವಹಿಸಿಕೊಂಡರಾದರೂ ಹೆಚ್ಚುಕಾಲ ಅಲ್ಲಿ ನಿಲ್ಲಲಿಲ್ಲ. ಇವರು ನಿಷ್ಠಾವಂತ ಗಾಂಧೀವಾದಿ. ಗಾಂಧೀಜಿಯ ಪ್ರಭಾವಕ್ಕೆ ಸಿಲುಕಿ ಅವರ ರಚನಾತ್ಮಕ ಕಾರ್ಯಗಳನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಸ್ವೀಕರಿಸಿದರು. 
ಇವರ ಸಾಹಿತ್ಯಕ ಬದುಕು ಆರಂಭಗೊಂಡದ್ದೇ ಸಣ್ಣಕಥೆಗಳಿಂದ ಇವರ `ಇತಿಹಾಸ ಭೂತ ಕತೆಗೆ 1951ರಲ್ಲಿ ಜಾಗತಿಕ ಕಥಾಸ್ಪರ್ಧೆಯಲ್ಲಿ ಎರಡನೆಯ ಬಹುಮಾನ ಲಭಿಸಿತು. ಸಣ್ಣಕತೆಗಾರರಾಗಿ, ಕತೆಗಳನ್ನು ಹೇಳುವ ಕಲೆಯಲ್ಲಿ ಇವರಿಗೆ ಸಿದ್ಧಿಸಿದ್ದ ಶೈಲಿ ಬೆರಗುಗೊಳಿಸುವಂಥದ್ದು. ಅನುಭವಗಳ ಗಟ್ಟಿ ನೆಲದ ಮೇಲೆ ಬದುಕಿನ ಸಹಸ್ರಮುಖ ದರ್ಶನ ಮಾಡಿಸುವ ಕಲೆಗಾರಿಕೆ ಇವರದು.
ರಾವ್ ಬಹದ್ದೂರ್ ಹುಟ್ಟು ರೈತರು. ಒಕ್ಕಲುತನ ಇವರ ಕುಟುಂಬದ ವೃತ್ತಿ. ಸಾಯುವ ತನಕ ಮಣ್ಣಿನ ಬದುಕಿನ ಜೀವಂತ ಸಂಪರ್ಕವನ್ನಿಟ್ಟುಕೊಂಡಿದ್ದರು. 1960ರಿಂದೀಚೆಗೆ ವ್ಯವಸಾಯವನ್ನೇ ಮುಖ್ಯವೃತ್ತಿಯನ್ನಾಗಿಸಿಕೊಂಡು ಬರೆವಣಿಗೆಯನ್ನು ಹವ್ಯಾಸವಾಗಿ ಮಾಡಿಕೊಂಡಿದ್ದರು. ರಾವ್‍ಬಹದ್ದೂರ್ ಉತ್ತಮ ವಾಗ್ಮಿಯಾಗಿದ್ದರು. ಹುಟ್ಟೂರಿನ ಭಾಷೆಯ ಎಲ್ಲ ಸೊಗಡು ಸೊಗಸನ್ನು ಬೆರಸಿ ಇವರು ಆಡುವ ಮಾತುಗಳನ್ನು ಕೇಳುವುದೇ ಒಂದು ಆನಂದವಾಗಿತ್ತು. ರಾವ್ ಬಹದ್ದೂರರು ಒಮ್ಮೆ ಬಾಂಗ್ಲಾದೇಶದ ಪ್ರವಾಸಮಾಡಿದ್ದರು. ಈ ಪ್ರವಾಸದ ಅನುಭವವನ್ನು `ನಾ ಕಂಡ ಬಾಂಗ್ಲಾದೇಶ ದಲ್ಲಿ ದಾಖಲಿಸಿದ್ದಾರೆ.

ಇವರು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕøತರಾಗಿದ್ದರು (ವೃಂದಾವನ). `ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಇವರ ಕಾದಂಬರಿ ಧೂಮಕೇತು ಪ್ರಥಮ ಬಹುಮಾನ ಪಡೆಯಿತು. ಗ್ರಾಮಾಯಣ, ಧೂಮಕೇತು, ಬಿತ್ತಿ ಬೆಳೆದವರು, ವೃಂದಾವನ, ಕನಸು-ನನಸು, ದೇವದಾಸಿ, ಸೂಜಿಗಲ್ಲು, ಗೌಡರಕೋಣ, ಕಾಂಚನಮೃಗ, ತಬ್ಬಲಿಗಳು, - ಇವು ಕಾದಂಬರಿಗಳು. ಮನೆಸುಟ್ಟ ಕಿಡಿ, ಮನ ಬೆಳಗಿತು, ಇತಿಹಾಸ ಭೂತ ನೆರೆಹೊರೆ ಇವು ಕಥಾಸಂಕಲನಗಳು. `ಮರೆಯದ ನೆನಹುಗಳು ಅನುಭವ ಸಾಹಿತ್ಯ. (ಅನುಭವ ಹರಟೆ) 	
(ಟಿ.ಎಚ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ